ಹೊರಜಿ ಮಾರ್ಗ -
	ರಸ್ತೆ ನಿರ್ಮಾಣ ಮಾಡಲು ಆಗದ ಮತ್ತು ಬಹು ವೆಚ್ಚ ತಗಲುವ ಬೆಟ್ಟ, ಕಣಿವೆ ಪ್ರದೆಶಗಳಲ್ಲಿ ಸಂಪರ್ಕ ಮತ್ತು ವಸ್ತು ಸಾಗಣೆಗೆ ಬಳಸುವ ಹಗ್ಗದ ಮಾರ್ಗ (ರೊಪ್ ವೇ) . ಭಾರ ಪದಾರ್ಥಗಳನ್ನು ಮಿತ ವೆಚ್ಚ ಹಾಗೂ ಅಲ್ಪ ಕಾಲದಲ್ಲಿ ಸಾಗಿಸಲು ಇದು ಅನುಕೂಲ. ಬೆಟ್ಟ ಪ್ರದೇಶಗಳಲ್ಲಿ ಅಲ್ಪ ದೂರಗಳ ಸಾಗಣೆಗೆ ಮಾತ್ರ ಇದನ್ನು ಅನುಸರಿಸುತ್ತಾರೆ. ಸಾಗಣೆ ವಿಧಾನಗಳು ಸಾಧ್ಯವಿಲ್ಲದಾಗ ಅಥವಾ ರಸ್ತೆ ಸಾರಿಗೆಗೆ ಬಲು ವೆಚ್ಚ ತಗಲುವ ಪ್ರದೇಶಗಳಲ್ಲಿ ಈ ವಿಧಾನ ಅನುಕೂಲವಾಗಿರುತ್ತದೆ. ಭಾರತದಲ್ಲಿ ಹೊರಜಿ ಮಾರ್ಗಗಳು ಬಹುತೇಕವಾಗಿ ಅಸ್ಸಾಮ್, ಕೇರಳ, ಬಂಗಾಳ ಹಾಗೂ ಬಿಹಾರ ರಾಜ್ಯಗಳಲ್ಲಿವೆ.

	ಭಾರತದಲ್ಲಿ ಸುಮಾರು 100 ಹೊರಜಿ ಮಾರ್ಗಗಳಿವೆ. ಇವುಗಳಲ್ಲಿ 28 ಹೊರಜಿ ಮಾರ್ಗಗಳನ್ನು ಮರಳು, ಕಲ್ಲಿದ್ದಲು, ಅದುರು ಮುಂತಾದ ವನ್ನು ಸಾಗಿಸಲು ಬಳಸಲಾಗುತ್ತಿದೆ. ಒಟ್ಟು ಉದ್ದ 120ಕಿಮೀ. ಗಂಟೆಗೆ 2447 ಟನ್ ಹೊರುವ ಸಾಮಥ್ರ್ಯವಿದೆ. ಬಿಹಾರದ ಧನಬಾದ್ ಮತ್ತು ಪಶ್ಚಿಮ ಬಂಗಾಲದ ಬದ್ರ್ವಾನ್ ಜಿಲ್ಲೆಗಳಲ್ಲಿ ಹೆಚ್ಚು ಸಾಮಥ್ರ್ಯವುಳ್ಳ ಹೊರಜಿ ಮಾರ್ಗಗಳಿವೆ. ಮರಳನ್ನು ಅವುಗಳ ಉಗಮಸ್ಥಾನದಿಂದ ಕಲ್ಲಿದ್ದಲು ಗಣಿಗಳಿಗೆ ಸಾಗಿಸಲು ವ್ಯಾಗನ್‍ಗಳಲ್ಲಿ ತುಂಬಲೂ, ಕಲ್ಲಿದ್ದಲನ್ನು ಗಣಿಗಳಿಂದ ರೈಲು ಕೇಂದ್ರದವರೆಗೆ ಸಾಗಿಸಲೂ ಮಾರ್ಗಗಳನ್ನು ಬಳಸಲಾಗುತ್ತದೆ.

	ಈ ಮಾರ್ಗಗಳಲ್ಲಿ ಕಬ್ಬಿಣದ ಅದುರು, ಬಾಕ್ಸೈಟ್ ಮತ್ತಿತರ ಸಾಮಗ್ರಿ ಸಾಗಣೆಯೂ ನಡೆಯುವುದು. ಇತರ ಸಾಗಣೆ ಸಾಧನಗಳೊಂದಿಗೆ ಹೋಲಿಸಿದರೆ ಹೊರಜಿ ಮಾರ್ಗ ನಿರ್ಮಾಣದ ಪ್ರಾರಂಭಿಕ ವೆಚ್ಚ ಹೆಚ್ಚು. ಮುಂದಿನ ನಿರ್ವಹಣ ವೆಚ್ಚ ಕಡಿಮೆ. ಈ ಹಿಂದೆ ಸುಮಾರು 120 ಲಕ್ಷ ಟನ್‍ಗಳ ಸಾಗಣೆಯ ಸಾಮಥ್ರ್ಯವಿತ್ತು. ವರ್ಷಕ್ಕೆ 80 ಲಕ್ಷ ಟನ್‍ಗಳ ಸಾಗಣೆ ನಡೆಯುತ್ತಿತ್ತು ಗಂಟೆಗೆ 4,640 ಟನ್ ಸಾಗಣೆ ಸಾಮಥ್ರ್ಯವುಳ್ಳ, 205 ಕಿಮೀ. ದೂರದ 13 ಹೊಸ ಹೊರಜಿ ಮಾರ್ಗಗಳನ್ನು ಝರಿಯಾ ಹಾಗೂ ರಾಣಿಗಂಜ್ ಕಲ್ಲಿದ್ದಲ ಗಣಿಗಳಲ್ಲಿ ನಿರ್ಮಿಸುವ ಯೋಜನೆ ಆಗಲೇ ಕಾರ್ಯಗತಮಾಡಿದ್ದು ಇದರ ಒಟ್ಟು ವೆಚ್ಚ 24 ಕೋಟಿ ರೂಪಾಯಿಗಳಾಗಬಹುದು. 13 ಮಾರ್ಗಗಳು ಸೇರಿದಂತೆ ಎಲ್ಲ ಮಾರ್ಗಗಳ ಒಟ್ಟು ಸಾಮಥ್ರ್ಯ ಗಂಟೆಗೆ 7000 ಟನ್‍ಗಳೆಂದು ಅಂದಾಜು.								
			(ಸಿ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ